Friday, 5 September 2014

'ಗೂಂಡಾ ಕಾಯಿದೆ' - ದುರ್ಭಳಕೆಯ ಭೀತಿಯಲ್ಲಿ

'ಗೂಂಡಾ ಕಾಯಿದೆ' ಇದು ಕರ್ನಾಟಕ ರಾಜ್ಯದ ಪ್ರಸ್ತುತ ವರ್ತಮಾನದಲ್ಲಿ ಬಹುವಾಗಿ ಚರ್ಚಿಸಲ್ಪದುತ್ತಿರುವ ವಿಷಯ. ಈಗಾಗಲೇ ರಾಜ್ಯದ ಅನೇಕ ಕಾನೂನು ಬಾಹಿರ ಚಟುವಟಿಕೆಗಳನ್ನು ಗೂಂಡಾ ಕಾಯಿದೆಯಡಿ ತಂದಿರುವ ರಾಜ್ಯಸರ್ಕಾರ ಅದಿನ್ನೆಷ್ಟು ಚಟುವಟಿಕೆಗಳನ್ನು ಗೂಂಡಾ ಕಾಯಿದೆಯಡಿ ತರಬಹುದೆಂದು ಕಾದು ನೋಡಬೇಕು. ಸರ್ಕಾರ, ರಾಜ್ಯದಲ್ಲಿ ಹೆಚ್ಚುತ್ತಿರುವ ಅಹಿತಕರ ಘಟನೆಗಳನ್ನು ಹಾಗೂ ಅಪರಾಧಗಳನ್ನು ತಡೆಗಟ್ಟುವ ಉದ್ದೇಶದಿಂದ ಗೂಂಡಾ ಕಾಯಿದೆಯನ್ನು ತನ್ನ ಬತ್ತಳಿಕೆಯ 'ಸರ್ಪಾಸ್ತ್ರ'ದಂತೆ ಉಪಯೋಗಿಸುತ್ತಿದೆ ಎಂದರೆ ಅತಿಶಯೋಕ್ತಿಎನಿಸಲಾರದು. ಇತ್ತೀಚಿನ ದಿನಗಳವರೆಗೆ, ಕಳ್ಳಭಟ್ಟಿ, ಮಾದಕ ದ್ರವ್ಯಗಳು, ಅನೈತಿಕ/ಕಳ್ಳ ಸಾಗಣೆಗಳು ಹಾಗೂ ಜೂಜು ಇವಿಷ್ಟೇ ಅಪರಾಧಗಳು ಈ ಗೂಂಡಾ ಕಾಯಿದೆಯಡಿ ಶಿಕ್ಷೆಗೆ ಅರ್ಹವಾದ ಅಪರಾದಗಳಾಗಿದ್ದವು. ಆದರೆ ಕರ್ನಾಟಕ ರಾಜ್ಯಸರ್ಕಾರ 'ಆಸಿಡ್ ದಾಳಿಕೋರರು' ಹಾಗೂ 'ಕಾಮುಕರನ್ನು' ಈ ಕಾಯಿದೆಯಡಿ ಸೇರಿಸುವ ಭರದಲ್ಲಿ 'ಭಾರತೀಯ ಕೃತಿಸ್ವಾಮ್ಯ (Indian Copyright Act 1957)' ಹಾಗೂ 'ಮಾಹಿತಿ ತಂತ್ರಜ್ಞಾನ ಕಾಯಿದೆ (Information Technology Act, 2000)' ಸೇರಿದಂತೆ ಇನ್ನೂ ಅನೇಕ ಅಪರಾಧಗಳನ್ನು ಗೂಂಡಾ ಕಾಯಿದೆಯಡಿ ತಂದಿರುವುದು ಚರ್ಚೆಗೆ ಕಾರಣವಾಗಿದೆ. ಅಷ್ಟಕ್ಕೂ ಭಾರತೀಯ ಸಂಹಿಧಾನದ ಪ್ರಕಾರ, ಕೃತಿಸ್ವಾಮ್ಯ (Copyright) ಹಾಗೂ ದೂರಸಂಪರ್ಕ (Telecommunications) ವಿಷಯಗಳು ವಿಶೇಷವಾಗಿ ಕೇಂದ್ರ ವಿಷಯಗಳಾಗಿರುವುದರಿಂದ, ಯಾವುದೇ ರಾಜ್ಯಸರ್ಕಾರ ಅಷ್ಟು ಸುಲಭವಾಗಿ ತಿದ್ದುಪಡಿ ತರಲು ಸಾಧ್ಯವಿರುವುದಿಲ್ಲವಾಗಿತ್ತು ಎಂಬುದು ಗಮನಿಸಬೇಕಾದ ಅಂಶವಾಗಿದೆ.

ಭಾರತೀಯ ಕಾನೂನು ತಿದ್ದುಪಡಿ 2001 ರ ಕಾಯಿದೆ 16, Section 2(ಜಿ) ಯ ಪ್ರಕಾರ 'ಗೂಂಡಾ' ಎಂಬುದರ ವ್ಯಾಖ್ಯಾನ, "ವ್ಯಕ್ತಿ, ವಯಕ್ತಿಕವಾಗಿ ಇಲ್ಲವೇ ಒಂದು ಗುಂಪಿನ ಮುಖ್ಯಸ್ತನಾಗಿ ಅಥವಾ ಗುಂಪಿನ ಸಾಮಾನ್ಯ ಸದಸ್ಯನಾಗಿ, ಅಪರಾಧ ಅಥವಾ ಅಪರಾಧ ಪ್ರಯತ್ನವನ್ನು ಪುನರಾರಂಬಿಸಿದರೆ ಅಥವಾ ಅಪರಾಧಕ್ಕೆ ಉತ್ತೇಜನ ನೀಡಿದ್ದಲ್ಲಿ ಆ ವ್ಯಕ್ತಿ, ಭಾರತೀಯ ದಂಡಸಂಹಿತೆ 1860 ರ ಕೇಂದ್ರ ಕಾಯಿದೆ 45 ರ ಅಡಿಯಲ್ಲಿ ಶಿಕ್ಷೆಗೆ ಅರ್ಹನಾಗಿರುತ್ತಾನೆ." ಎಂದಾಗಿರುತ್ತದೆ.

ಕರ್ನಾಟಕ ಶಾಸಕಾಂಗ ಸಭೆ, ಕಳೆದ ಜುಲೈ 28 ರಂದು ನೀಡಿದ ಗೂಂಡಾ ಕಾಯಿದೆಯ ತಿದ್ದುಪಡಿಯ ವ್ಯಾಖ್ಯಾನಕ್ಕೆ, ಶಾಸಕರ ಬಹುಮತ ದೊರಕಲು ಸದನದಲ್ಲಿ ಹೆಚ್ಚು ಸಮಯ ಹಿಡಿಯಲಿಲ್ಲ. ಈ ನೂತನ ತಿದ್ದುಪಡಿಯ ಅಡಿಯಲ್ಲಿ 'ಕಳ್ಳಭಟ್ಟಿ, ಮಾದಕ ದ್ರವ್ಯಗಳು, ಜೂಜು, ಗೂಂಡಾಗಳು, ಅನೈತಿಕ/ಕಳ್ಳ ಸಾಗಣಿಕೆಗಳು, ಕೊಳೆಗೇರಿ ಅತಿಕ್ರಮಣ, ದೃಶ್ಯ ಹಾಗೂ ಶ್ರವಣ ಪ್ರತಿಗಳ ನಕಲು, ಆಸಿಡ್ ದಾಳಿಕೋರರು, ಪ್ರಾಣಿ/ಪಕ್ಷಿ/ಪರಿಸರ ಗಳ ಮೇಲಿನ ದಾಳಿಕೋರರು, ಡಿಜಿಟಲ್ ಅಪರಾಧಿಗಳು ಹಾಗೂ ಲೈಂಗಿಕ ಪರಭಕ್ಷಕರು' ಗೂಂಡಾ ಕಾಯಿದೆಯಡಿಯ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡವು. 

ಈ ಮೊದಲು 'ಕೃತಿ ಚೌರ್ಯ' (Piracy) ಅಥವಾ 'ತಂತ್ರಜ್ಞಾನ ನಕಲು' ಎಂಬ ಅಪರಾಧಗಳು ಕೇವಲ ಸಿನೆಮಾ DVD ಹಾಗೂ ಸಾಫ್ಟ್ ವೇರ್ ಗಳಷ್ಟೇ ಗೂಂಡಾ ಕಾಯಿದೆ ಅಡಿಯಲ್ಲಿ ಸೀಮಿತವಾದ ಅಪರಾಧಗಳಾಗಿದ್ದವು. ಆದರೆ ರಾಜ್ಯಸರ್ಕಾರದ ನೂತನ ತಿದ್ದುಪಡಿಯ ಪ್ರಕಾರ ಪುಸ್ತಕಗಳು, ಸಿನಿಮಾ ಹಾಡುಗಳು, ಸಂಗೀತ ಹಾಗೂ ಬಹುರಾಷ್ಟ್ರೀಯ ಕಂಪನಿಗಳು ಹೊಂದಿರುವಂತಹ ಕೃತಿಸ್ವಾಮ್ಯಗಳಿಗೆ (Copyright) ಒಳಪಡುವ ಎಲ್ಲ ವಸ್ತುಗಳು ಕೂಡ ಗೂಂಡಾ ಕಾಯಿದೆಯಡಿಗೆ ಒಳಪಡುತ್ತವೆ. ಸರ್ಕಾರದ ಈ ಕ್ರಮದಿಂದ ಸಾಮಾನ್ಯ ಜನರಮೇಲೆ ಅನಾನುಕೂಲವೇ ಹೆಚ್ಚಾಗಿರುವುದು ವಿಪರ್ಯಾಸವೇ ಸರಿ.

ಹಲವು ನ್ಯಾಯವಾದಿಗಳ ಪ್ರಕಾರ ಗೂಂಡಾ ಕಾಯಿದೆಯಡಿ ಅಪರಾಧಿಯನ್ನು 'ಅಪರಾಧ ತಡೆಗಟ್ಟುವ' (Preventive Arrest) ಆದಾರದಮೇಲೆ, ಅಪರಾಧ ಎಸಗುವ/ಸಾಭೀತಾಗುವ ಮೊದಲೇ ಬಂಧಿಸುವ ಅವಕಾಶ ಕಾನೂನಿಗಿರುತ್ತದೆ. ಅದೇ  Information Technology Act ಹಾಗೂ The Copyright Act ಅಡಿಯಲ್ಲಿ ಅಪರಾಧ ಎಸಗಿದ್ದು ಸಾಭೀತಾದರೆ ಮಾತ್ರ ಬಂಧಿಸಬಹುದಾಗಿತ್ತು. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಇತರ ಬಂಧನದಲ್ಲಿ ಬಂಧಿತ ವ್ಯಕ್ತಿ ತಕ್ಷಣ ಜಾಮೀನು ಅರ್ಜಿ ಸಲ್ಲಿಸಬಹುದು. ಆದರೆ ಗೂಂಡಾ ಕಾಯಿದೆಯಡಿಯಲ್ಲಿ ಭಂದಿತ ವ್ಯಕ್ತಿಗೆ ಈ ಅವಕಾಶವಿರುವುದಿಲ್ಲ, ಗೂಂಡಾ ಕಾಯಿದೆಯಲ್ಲಿ ಜಾಮೀನು ಎಂಬುದು ಒಂದು ಸುದೀರ್ಘ ಪ್ರಕ್ರಿಯೆ ಯಾಗಿರುತ್ತದೆ. ಎಲ್ಲಕ್ಕಿಂತ ಹೆಚ್ಹಾಗಿ ಗೂಂಡಾ ಕಾಯಿದೆಯಡಿ ಬಂಧಿತ ವ್ಯಕ್ತಿಯ ವಿವರ  ಪೋಲಿಸ್ ಠಾಣೆ ಯಲ್ಲಿ ಶಾಶ್ವತ ಧಾಖಲಾಗುತ್ತದೆ.

CISನ (The Center for Internet & Society) ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಸುನಿಲ್ ಅಬ್ರಹಾಂ ಅವರು ಗೂಂಡಾ ಕಾಯಿದೆಯ ತಿದ್ದುಪಡಿಯ ದುಷ್ಪರಿಣಾಮಗಳ ಬಗ್ಗೆ ಸೂಕ್ತ ಉದಾಹರಣೆಯೊಂದಿಗೆ ನೀಡಿದ ವಿವರ ಇಂತಿದೆ, ಒಬ್ಬ ವ್ಯಕ್ತಿ, ವೈಜ್ಞಾನಿಕ ದೃಷ್ಟಿಯಲ್ಲಿ ಒಬ್ಬ ಮನುಷ್ಯನ ದೇಹರಚನೆ, ಅಂಗಾಂಗಗಳ ವಿವರಣೆ ನೀಡುವ ಉದ್ದೇಶದಿಂದ ಒಂದು ಮಾನವನ ನಗ್ನ ಚಿತ್ರವನ್ನು ಪ್ರಕಟಿಸಿದ್ದಲ್ಲಿ ಅದು ಅಶ್ಲೀಲ/ಕಾಮ ಪ್ರಚೋದಕ ವಾಗಲು ಸಾಧ್ಯವಿಲ್ಲ, ಆದರೆ ಒಂದುವೇಳೆ ಆ ವ್ಯಕ್ತಿಯನ್ನು Information Technology ಕಾಯಿದೆಯಡಿ ಬಂದಿಸಿದ್ದಲ್ಲಿ, ಆತನನ್ನು ಮುಂದಿನ 24 ಘಂಟೆಯೊಳಗೆ ನ್ಯಾಯಾಧೀಶರ ಸಮ್ಮುಖದಲ್ಲಿ ಹಾಜರು ಪಡಿಸಲಾಗುವುದು, ಆತ ನ್ಯಾಯಾಧೀಶರಿಗೆ ನಡೆದ ಘಟನೆಯ ವಿವರಣೆ ನೀಡುವ ಅವಕಾಶವಿರುತ್ತದೆ. ಆದರೆ ಆತನನ್ನು ಗೂಂಡಾ ಕಾಯಿದೆಯಡಿ ಬಂಧಿಸಿದರೆ, ನ್ಯಾಯಾಧೀಶರ ಮುಂದೆ ಹಾಜರುಪಡಿಸಲು 90 ದಿನಗಳ ಅವಕಾಶವಿದ್ದು ಅದನ್ನು ಒಂದು ವರ್ಷಗಳವರೆಗೆ ವಿಸ್ತರಿಸುವ ಸಾದ್ಯತೆ ಕೂಡ ಇರುತ್ತದೆ. ಇದರಿಂದ ವ್ಯಕ್ತಿ ತನ್ನದಲ್ಲದ ತಪ್ಪಿಗೆ ಒಂದು ವರ್ಷಗಳ ಕಾಲ ಶಿಕ್ಷೆ ಅನುಭವಿಸುವುದು ನಿರ್ದಯ ಎನಿಸುವುದಿಲ್ಲವೇ? ಇದೆ ರೀತಿ, ಈ ಮೊದಲು Copyright ಕಾಯಿದೆಯಡಿಯಲ್ಲಿ ಅಂಗವೈಕಲ್ಯದಿಂದ ಬಳಲುತ್ತಿರುವವರಿಗೆ, ಸಂಶೋಧನೆ ಹಾಗೂ ಶೈಕ್ಷಣಿಕ ವರದಿಗಳಲ್ಲಿ ರಿಯಾಯತಿ ಇದ್ದವು, ಈ ಕಾಯಿದೆಯ ಪ್ರಕಾರ ಒಬ್ಬ ದೃಷ್ಟಿಹೀನ ವ್ಯಕ್ತಿ ಯಾವುದೇ ಗೌರವಧನ ಪಾವತಿಸದೇ ಒಂದು ಪುಸ್ತಕವನ್ನು ಬ್ರೈಲ್(ಅಂಧರ ಲಿಪಿ) ಅಥವಾ ಆಡಿಯೋ ಸ್ವರೂಪಕ್ಕೆ ತರ್ಜುಮೆಗೊಳಿಸಿ ಇನ್ನೊಬ್ಬ ದೃಷ್ಟಿಹೀನ ವ್ಯಕ್ತಿಗೆ ಉಚಿತವಾಗಿ ನೀಡಿದ್ದಲ್ಲಿ ಅದು ಅಪರಾಧವಾಗುತ್ತಿರಲಿಲ್ಲ. ಆದರೆ ಈಗಿನ ಗೂಂಡಾ ಕಾಯಿದೆಯಡಿ ಆ ದ್ರಷ್ಟಿಹೀನ ವ್ಯಕ್ತಿ ತನ್ನದಲ್ಲದ ತಪ್ಪಿಗೆ ಕನಿಷ್ಠ ಒಂದು ವರ್ಷ ಸಜೆಯನ್ನು ಅನುಭವಿಸಬೇಕಾಗಿರುವುದು ಎಷ್ಟು ಸಮಂಜಸ?

ಈ ಎಲ್ಲ ಬೆಳವಣಿಗೆಯಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ Cyber Crime ನ ಬಗ್ಗೆ ಜನಸಾಮಾನ್ಯರಲ್ಲಿ ಸಂಪೂರ್ಣ ಜ್ಞಾನ ಇಲ್ಲದಿರುವುದು, ಈ ಬಗ್ಗೆ ಜನರಲ್ಲಿ ಜಾಗ್ರತಿ ಮೂಡಿಸಬೇಕಾದ ಅವಶ್ಯಕತೆ ತೀರ ಅಗತ್ಯವಾಗಿರುತ್ತದೆ. ನಮ್ಮನ್ನಾಳುವ ರಾಜಕಾರಣಿಗಳಿಂದ ಹಿಡಿದು ಸಾಮಾನ್ಯ ಪ್ರಜೆಗಳವರೆಗೆ Cyber Crime ಬಗ್ಗೆ ಯಾರಿಗೂ ಸಂಪೂರ್ಣ ಮಾಹಿತಿಯಿಲ್ಲದಿರುವ ಸಂದರ್ಭದಲ್ಲಿ IT Act ಹಾಗೂ Copyright Act ಗಳನ್ನು ಕೂಡ ಗೂಂಡಾ ಕಾಯಿದೆಯಡಿ ಒಳಪಡಿಸಿರುವುದು ಆತಂಕಕಾರಿ ವಿಷಯವಾಗಿದೆ. ಪ್ರಸ್ತುತ ವರ್ತಮಾನದಲ್ಲಿ ನಮ್ಮ ಬಹುತೇಕ ಯುವಕ/ಯುವತಿಯರು ಸಾಮಾಜಿಕ ಜಾಲತಾಣಗಳಾದ WhatsApp, Facebook, Twitter, ಇತ್ಯಾದಿ ಗಳಿಗೆ ದಾಸರಾಗಿರುವುದು ಗೂಂಡಾ ಕಾಯಿದೆಯ ದುರ್ಬಳಕೆಯ ಆತಂಕವನ್ನು ಹೆಚ್ಚಿಸಿದೆ, ಸಾಮಾನ್ಯವಾಗಿ ತನ್ನ ಮೊಬೈಲ್/ಕಂಪ್ಯೂಟರ್ ನಲ್ಲಿ ತನಗೆ ದೊರಕಿದ ಸಂದೇಶ/ವೀಡಿಯೊ/ಆಡಿಯೋ ಗಳನ್ನು ಇತರರೊಂದಿಗೆ ಶೇರ್ ಮಾಡಿಕೊಳ್ಳುವ ಭರದಲ್ಲಿ ತನಗೆ ಅರಿವಿಲ್ಲದೆಯೇ ಗೂಂಡಾ ಕಾಯಿದೆಯಡಿಯಲ್ಲಿ ಸಿಲುಕಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ? 

ಅದೇ ರೀತಿ, ತೀರಾ ಇತ್ತೀಚಿನ ಬೆಳವಣಿಗೆಯಲ್ಲಿ, ಕರ್ನಾಟಕ ಸರ್ಕಾರ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವ ಉದ್ದೇಶದಿಂದ, ಸ್ತ್ರೀ ಪೀಡಕರು, ನಿಂದಕರು, ಪ್ರೀತಿ ಹೆಸರಿನಲ್ಲಿ ಮೋಸ/ವಂಚನೆ ಯನ್ನು ಎಸಗುವ ಪುರುಷರನ್ನು ಕೂಡ ಗೂಂಡಾ ಕಾಯಿದೆಯಡಿ ಶಿಕ್ಷಿಸುವ ನಿರ್ಧಾರ ಕೈಗೊಂಡಿರುವುದು ಗೂಂಡಾ ಕಾಯಿದೆಯ ದುರ್ಬಳಕೆಯ ಆತಂಕವನ್ನು ಇನ್ನೂ ಹೆಚ್ಚಿಸಿದೆ. ಈ ರೀತಿ ಕಾನೂನು ದುರ್ಭಳಕೆಯಾದ ಅದೆಸ್ಟೋ ಘಟನೆಗಳು ವರದಿಯಾಗುತ್ತಲೇ ಇರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಈ ರೀತಿಯ ದೌರ್ಜನ್ಯ ಮಹಿಳೆಯರ ಮೇಲಷ್ಟೇ ಆಗಬೇಕೆಂದೇನಿಲ್ಲ, ಅದೆಷ್ಟೋ ಪುರುಷರು ಕೂಡ ಮಹಿಳೆಯರಿಂದ ಕಿರುಕುಳಕ್ಕೊಳಗಾಗಿ ಆತ್ಮಹತ್ಯೆ, ಖಿನ್ನತೆ  ಹಾಗೂ ಸಮಾಜ ಘಾತುಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ವರದಿಗಳು ಪುರುಷರ ಮೇಲಿನ ದೌರ್ಜನ್ಯವನ್ನು ಪುಷ್ಟೀಕರಿಸುತ್ತದೆ. ಈಗಾಗಲೇ ವರದಕ್ಷಿಣೆ ನಿರ್ಮೂಲನೆ ಕಾಯಿದೆ (Section 498(A) of IPC and Sections 3 and 4 of Dowry Prohibition Act ) ದುರ್ಬಳಕೆಯಾದ ಕಾನೂನಿಗೆ ಒಂದು ಜ್ವಲಂತ ಉದಾಹರಣೆ ಎನ್ನಬಹುದು.  

ಹಲವು ಕಾನೂನು ತಜ್ಞರ ಪ್ರಕಾರ ಗೂಂಡಾ ಕಾಯಿದೆಯಲ್ಲಿನ ತಿದ್ದುಪಡಿ ಹಾಗೂ ಸೇರಿಸಿರುವ ಹೊಸ ವಿಷಯಗಳು ಖಂಡಿತ ಜನಸಾಮಾನ್ಯರಿಗೆ ಅನೇಕ ದುಷ್ಪರಿಣಾಮವನ್ನು ಉಂಟುಮಾಡುವುದರಲ್ಲಿ ಸಂಶಯವಿಲ್ಲ. ಸರ್ಕಾರ ಸಮಾಜದ ಹಿತಕಾಪಾಡುವ ದೃಷ್ಟಿಯಿಂದ ರೂಪಿಸಿರುವ ಕಾನೂನು ದುರ್ಭಳಕೆಯಾಗದಂತೆ ಕಾಪಾಡುವುದು ಸರ್ಕಾರದ ಜವಾಬ್ಧಾರಿಯಾಗಿರುತ್ತದೆ. ಕಾನೂನು ತಜ್ಞರು, ಗೂಂಡಾ ಕಾಯಿದೆಯ ಮೂಲ ಉದ್ದೇಶ ಹಾಗೂ ಸಮಾಜದ ಸ್ವಾಸ್ತ್ಯ ಕಾಪಾಡುವ ನಿಟ್ಟಿನಲ್ಲಿ, ಗೂಂಡಾ ಕಾಯಿದೆಯ ತಿದ್ದುಪಡಿಯಬಗ್ಗೆ ಕೂಲಂಕುಶವಾಗಿ ಮರುಪರಿಶೀಲಿಸಿ, ಅಮೂಲಾಘ್ರ ಬದಲಾವಣೆಗಳನ್ನು ತರಬೇಕಾಗಿವ ಅವಶ್ಯಕತೆ ಇರುತ್ತದೆ.

ನಿಮ್ಮವ,
ಪಚ್ಚಿ